ಪೆಂಟ್ಯಾತ್ಲನ್ - 
ಐದು ಬಗೆಯ ಫೀಲ್ಡ್ ಮತ್ತು ಟ್ರ್ಯಾಕ್ ಸ್ಪರ್ಧೆಗಳ ಒಂದು ಗುಂಪು. ಗ್ರೀಕ್‍ನಲ್ಲಿ ಪೆಂಟ ಎಂದರೆ ಐದು. ಆತ್ಲಾನ್ ಎಂದರೆ ಸ್ಪರ್ಧೆ, ದೂರನೆಗೆತ, ಡಿಸ್ಕಸ್ ಎಸೆತ, ಕ್ರೀಡಾಂಗಣದ ಉದ್ದದಷ್ಟು ಓಟ, ಜಾವಲಿನ್ ಎಸೆತ, ಕುಸ್ತಿ ಈ ಐದು ಬಗೆಯ ಸ್ಪರ್ಧೆಗಳಿರುತ್ತವೆ. ಪುರಾತನ ಗ್ರೀಸಿನಲ್ಲಿ ನಡೆಯುತ್ತಿದ್ದ ಒಲಿಂಪಿಕ್ ಕ್ರೀಡೆಗಳಲ್ಲಿ ಇದು ಸೇರಿತ್ತು. ಸ್ಪರ್ಧಾಳುಗಳು ಈ ಗುಂಪಿನ ಮೊದಲ ನಾಲ್ಕು ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನಂತರ ಅತಿ ಹೆಚ್ಚು ಗೆಲ್ಲಂಕಗಳನ್ನು ಪಡೆದ ಇಬ್ಬರು ಸ್ಪರ್ಧಿಗಳು ಕುಸ್ತಿಯಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ಗೆದ್ದವನು ಪೆಂಟ್ಯಾತ್ಲನ್ನಿನಲ್ಲಿ ಗೆದ್ದಂತೆ. ಆಧುನಿಕ ಪೆಂಟ್ಯಾತ್ಲನ್ನಿನಲ್ಲಿ (ಇದನ್ನು ಮಿಲಿಟರಿ ಪೆಂಟ್ಯಾತ್ಲನ್ ಎಂದು ಕರೆಯಲಾಗಿದೆ) ಹಲವಾರು ಬದಲಾವಣೆಗಳಾಗಿವೆ. ಕುಸ್ತಿಗೆ ಬದಲಾಗಿ 1,500 ಮೀಟರ್ ಓಟವನ್ನು ಹಾಗೂ ಕ್ರೀಡಾಂಗಣದ ಉದ್ದದಷ್ಟು ಓಟದ ಬದಲಾಗಿ 200 ಮೀಟರ್ ಓಟವನ್ನು ಸೇರಿಸಲಾಗಿದೆ. 1912ರ ಒಲಿಂಪಿಕ್ ಕ್ರೀಡೆಯಲ್ಲಿ ಈ ಮಾರ್ಪಾಟನ್ನು ಪ್ರಥಮವಾಗಿ ಜಾರಿಗೆ ತರಲಾಯಿತು. ಆದರೆ 1974ರ ಅನಂತರ ಇವನ್ನು ಬಿಡಲಾಯಿತು. ಸ್ತ್ರೀಯರಿಗಾಗಿರುವ ಪ್ರತ್ಯೇಕ ಸ್ಪರ್ಧೆಯಲ್ಲಿ ಎತ್ತರ ನೆಗೆತ, 200 ಮೀಟರ್ ಓಟ, 80 ಮೀಟರ್ ಹರ್ಡಲ್ಸ್ ಓಟ ಮತ್ತು ದೂರ ಲಾಂಗ್‍ಜಂಪ್‍ಗಳಿರುತ್ತವೆ. ಅಂತರರಾಷ್ಟ್ರೀಯ ಪೆಂಟ್ಯಾತ್ಲನ್ ಸಂಘ ಕ್ರೀಡಾನಿಯಮಗಳನ್ನು ರೂಪಿಸುತ್ತದೆ.

ಒಲಿಂಪಿಕ್ ಕ್ರೀಡೆಗಳ ಮಹಿಳೆಯರ ವಿಭಾಗದಲ್ಲಿ ಪೆಂಟಾತ್ಲನ್ ಸ್ಪರ್ಧೆಯನ್ನು 1964ರಿಂದ ಆರಂಭಿಸಲಾಯಿತು. 1984ರ ಒಲಿಂಪಿಕ್ಸ್‍ನಿಂದ ಐದರ ಬದಲು ಏಳು ಸ್ಪರ್ಧೆಗಳೊಂದಿಗೆ ಹೆಪ್ಲಾತ್ಲನ್ ಸ್ಪರ್ಧೆ ಆರಂಭಿಸಲಾಯಿತು. ಈ ಹೆಪ್ಲಾತ್ಲನ್‍ನಲ್ಲಿ 100 ಮೀ. ಹರ್ಡಲ್ಸ್, ಹೈಜಂಪ್, ಷಾಟ್‍ಪುಟ್, 200 ಮೀ. ಓಟ, ಲಾಂಗ್‍ಜಂಪ್, ಜಾವೆಲಿನ್ ಎಸೆತ ಹಾಗೂ 800 ಮೀ. ಸ್ಪರ್ಧೆಗಳಿವೆ. ಮೊದಲ  ದಿನ ನಾಲ್ಕು ಹಾಗೂ ಎರಡನೇ ದಿನ ಕೊನೆಯ ಮೂರು ಸ್ಪರ್ಧೆಗಳು ನಡೆಯುತ್ತವೆ.

2004 ಅಥೆನ್ಸ್ ಒಲಿಂಪಿಕ್ಸ್‍ನ ಹೆಪ್ಲಾತ್ಲನ್‍ನಲ್ಲಿ ಭಾಗವಹಿಸಿದ್ದ ಭಾರತದ (ಕರ್ನಾಟಕ ಮೂಲದ) ಜೆ ಜೆ ಶೋಭಾ, ಪದಕ ಗೆಲ್ಲದಿದ್ದರೂ ತಮ್ಮ ಹೋರಾಟದ ಮನೋಭಾವದಿಂದ ಎಲ್ಲರ ಮೆಚ್ಚಗೆಗೆ ಪಾತ್ರರಾದರು. ಅವರು ಗಾಯಗೊಂಡಿದ್ದರೂ, 800 ಮೀ. ಓಟವನ್ನು ನೋವಿನಲ್ಲೇ ಪೂರ್ಣಗೊಳಿಸಿ, ಕ್ರೀಡಾಭಿಮಾನಿಗಳ ಪ್ರಶಂಸೆ ಗಳಿಸಿದ್ದರು. ಅವರ ಈ ಪ್ರದರ್ಶನಕ್ಕಾಗಿ, ಅವರಿಗೆ `ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.       							(ಎಸ್.ಎಚ್.ಕೆ.)
										(ಪರಿಷ್ಕರಣೆ : ಜಿ. ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ